ಕೊಮೀನಿಅಸ್, ಜಾನ್ ಏಮಸ್
1592-1670. ಚೆಕಸ್ಲೊವಾಕಿಯಾದ ಸಾಹಿತಿ, ತತ್ತ್ವಶಾಸ್ತ್ರಜ್ಞ ಮತ್ತು ಶಿಕ್ಷಣತಜ್ಞ. ಕೊಮೀನಿಅಸ್ ಜೊಹಾನಸ್ ಏಮಸ್ ಎಂಬ ಲ್ಯಾಟಿನ್ ರೂಪದಲ್ಲಿ ತನ್ನ ಹೆಸರನ್ನು ಬಳಸುತ್ತಿದ್ದ. ಹುಟ್ಟಿದ್ದು ಮೊರಾವಿಯದಲ್ಲಿ. ಬಡತನದಿಂದಾಗಿ ವಿದ್ಯಾಭ್ಯಾಸವನ್ನು ತಡವಾಗಿ ಆರಂಭಿಸಿದ. ತನ್ನ 16ನೆಯ ವಯಸ್ಸಿನಲ್ಲಿ ಲ್ಯಾಟಿನ್ ಶಾಲೆಯನ್ನು ಸೇರಿ ಅನಂತರ ಹರ್‍ಬಾರನ್ ಮತ್ತು ಹೈಡೆಲ್‍ಬರ್ಗ್‍ಗಳಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದ. ಈತನ ಜೀವನದಲ್ಲಿ ಪ್ರಮುಖವಾಗಿ ಮೂರು ಮುಖಗಳನ್ನು ಗುರುತಿಸಬಹುದು: ಚರ್ಚಿನ ನಡೆವಳಿಕೆಗಳಿಗೆ ಹೊಂದಿಕೊಂಡ ಈತನ ಜೀವನ, ಮಾನವನ ಜ್ಞಾನ ಸಂಪತ್ತಿನ ಕ್ರೋಢೀಕರಣದ ಬಗ್ಗೆ ಈತ ನಡೆಸಿದ ಸಂಶೋಧನೆ ಹಾಗೂ ಪ್ರಾಯೋಗಿಕ ಶಿಕ್ಷಣದ ಬಗ್ಗೆ ಈತ ತಳೆದಿದ್ದ ಆಸಕ್ತಿ,. 1618ರಲ್ಲಿ ಫುಲಕ್‍ನಲ್ಲಿ ಧರ್ಮೋಪದೇಶಕನಾದ. ಆದರೆ 1621ರಲ್ಲಿ ನಡೆದ ಸ್ಪೇನಿನ ದಂಗೆಯಿಂದಾಗಿ ಪೋಲೆಂಡಿಗೆ ತೆರಳಿದ. ಅಲ್ಲಿ ಬೊಹಿಮಿಯನ್ ಮತ್ತು ಮೊರಾವಿಯನ್ ಚರ್ಚುಗಳ ಅಧ್ಯಕ್ಷನಾದ. ಲಿಸ್ಸದಲ್ಲಿ ಲ್ಯಾಟಿನ್ ಬೋಧಕನಾಗಿಯೂ ಕೆಲಸ ಮಾಡಿದ. 1638ರಲ್ಲಿ ಸ್ವೀಡನ್ನಿಗೂ 1641ರಲ್ಲಿ ಇಂಗ್ಲೆಂಡಿಗೂ ಶಿಕ್ಷಣ ಮಂಡಳಿಯ ಸದಸ್ಯನಾಗಿ ಭೇಟಿ ನೀಡಿದ. ಇವನದು ವಿಶ್ವಕೋಶ ಸದೃಶವಾದ ಪಾಂಡಿತ್ಯ. ಸುಮಾರು ಇನ್ನೂರಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾನೆ. ಇವುಗಳಲ್ಲಿ ಸುಮಾರು ಇನ್ನೂರು ಇಂಗ್ಲಿಷಿಗೆ ಭಾಷಾಂತರವಾಗಿ ಪ್ರಕಟಗೊಂಡಿವೆ. ಈತನ ಜಗತ್ತಿನ ಚಕ್ರವ್ಯೂಹ ಮತ್ತು ಹೃದಯ ಸ್ವರ್ಗ ಎಂಬ ಅನ್ಯೋಕ್ತಿಕೃತಿ ಜನಪ್ರಿಯವೆನಿಸಿದೆ. `ಕೇಂದ್ರ ಆಶ್ರಯ ವೆಂಬುದು ಮನುಷ್ಯನ ಮತ್ತು ಪರಮಾತ್ಮನ ಸಂಬಂಧವನ್ನು ಕುರಿತ ಗಹನವಾದ ಚಿಂತನಪರ ಕೃತಿ. `ಸಾಯುತ್ತಿರುವ ತಾಯಿಯ ಮರಣಶಾಸನದಲ್ಲಿ (1648) ಚೆಕಸ್ಲೊವಾಕಿಯ ಜನರಿಗೆ ತಮ್ಮ ಹಿಂದಿನ ವೈಭವ ಮರಳುವುದೆಂಬ ಭರವಸೆಯನ್ನೂ ಸ್ಫೂರ್ತಿಯನ್ನೂ ನೀಡುವ ವೀರಭಾಷೆಯನ್ನೂ ಕಾಣಬಹುದಾಗಿದೆ. ಈತನ ಹಲವಾರು ಕೃತಿಗಳು ಯೂರೋಪಿನ ಮತ್ತು ಹೊರಗಿನ ದೇಶಗಳ ಶಿಕ್ಷಣತಜ್ಞರ ಮೇಲೆ ತೀವ್ರವಾದ ಪ್ರಭಾವವನ್ನು ಬೀರಿವೆ. 1910ರಲ್ಲಿ ಕೀಟಿಂಗ್‍ನಿಂದ ಸಂಪಾದಿಸಲ್ಪಟ್ಟು ಪ್ರಕಟವಾದ ಈತನ ಪ್ರಖ್ಯಾತ ಗ್ರಂಥ ದಿ ಗ್ರೇಟ್ ಡೈಡ್ಯಾಕ್ಟಿಕ್‍ನಲ್ಲಿ ಪ್ರಾಯೋಗಿಕ ಶಿಕ್ಷಣದ ಬಗೆಗಿನ ಈತನ ಸಿದ್ಧಾಂತ ಮತ್ತು ಧೋರಣೆಗಳನ್ನು ನೋಡಬಹುದು. ಆಮ್‍ಸ್ಟರ್‍ಡಮ್‍ನಲ್ಲಿ ಈತ ಕಾಲವಾದ . (ಎಲ್.ಎಸ್.ಎಸ್).

	ಸಾರ್ವತ್ರಿಕ ಶಿಕ್ಷಣದ ತತ್ತ್ವದೃಷ್ಟಿಯನ್ನು ಪ್ರಚಾರ ಮಾಡಿದ ಚಿಂತಕರಲ್ಲಿ ಕೊಮೀನಿಅಸ್ ಅಗ್ರಗಣ್ಯ. ತನ್ನ ಗ್ರೇಟ್ ಡೈಡ್ಯಾಕ್ಟಿಕ್ ಎಂಬ ಕೃತಿಯಲ್ಲಿ ಶಿಕ್ಷಣದ ಬಗ್ಗೆ ತನ್ನ ತತ್ತ್ವದೃಷ್ಟಿಯನ್ನು ವ್ಯಕ್ತಪಡಿಸಿದ್ದಾನೆ. ಹುಡುಗರಾಗಲಿ, ಹುಡುಗಿಯರಾಗಲಿ, ಬಡವರಾಗಲಿ, ಬಲ್ಲಿದರಾಗಲಿ, ನಾಗರೀಕರಾಗಲಿ, ಗ್ರಾಮಸ್ಥರಾಗಲಿ- ಎಲ್ಲರಿಗೂ ಶಿಕ್ಷಣ ಅಗತ್ಯ. ಅಧಃಪತನ ಹೊಂದುತ್ತಿರುವ ಮಾನವ ಜನಾಂಗವನ್ನು ಉದ್ಧರಿಸಿ ಪ್ರಪಂಚದಲ್ಲಿ ಶಾಂತಿಯನ್ನು ಸ್ಥಾಪಿಸಿ ವಿಶ್ವಭ್ರಾತೃತ್ವವನ್ನು ಸಾಧಿಸಲು ಅದೊಂದು ಮಾರ್ಗ ಎಂಬುದು ಇವನ ಅಭಿಪ್ರಾಯ. ಎಲ್ಲ ವಿಷಯಗಳಲ್ಲೂ ಸಂಯೋಜನೆಯನ್ನು ಸ್ಥಾಪಿಸುವುದು ಸಮಾಜದ ಪ್ರಗತಿಗೂ ಮಾನವ ಕಲ್ಯಾಣಕ್ಕೂ ಅಗತ್ಯವೆಂದು ಈತ ಭಾವಿಸಿದ್ದ. ಅಂಥ ಕಾರ್ಯವನ್ನು ಸಾಧಿಸಲು ಈತ ಪ್ಯಾನ್ಸೋಫಿಕ್ ಕಾಲೇಜೊಂದನ್ನು ಸ್ಥಾಪಿಸುವಂತೆ ತನ್ನ ಇಂಗ್ಲಿಷ್ ಗೆಳೆಯರನ್ನು ಪ್ರೋತ್ಸಾಹಿಸಿದ. ಸಾರ್ವತ್ರಿಕ ಶಿಕ್ಷಣ ಪ್ರಚಾರವಾಗಿ ಆ ಮೂಲಕ ಜನತೆಯಲ್ಲಿ ವಿಶ್ವಜ್ಞಾನ ಮೂಡುವುದಾದರೆ ಪ್ರಪಂಚದಲ್ಲಿ ಸಾಮರಸ್ಯವೂ ಶಾಶ್ವತ ಸುಖಶಾಂತಿಗಳೂ ನೆಲೆಸುವುದೆಂದು ಈತ ನಂಬಿದ್ದ. ಶಿಕ್ಷಣದಂತೆ ಮಾನವ ಜೀವನದಲ್ಲೂ ಈತನಿಗೆ ಆಸಕ್ತಿಯಿತ್ತು. ಕೇವಲ ವಿಶ್ವದ ರಾಜಕೀಯ ಮತ್ತು ಆಡಳಿತಗಳಿಗೆ ಮಾತ್ರವಲ್ಲದೆ ಗ್ರಂಥ, ಭಾಷೆ, ಪಾಠಶಾಲೆ, ಮಹಾವಿದ್ಯಾಲಯ ಇವೆಲ್ಲಕ್ಕೂ ವಿಶ್ವವ್ಯಾಪಕವೆನ್ನಬಹುದಾದ ವ್ಯವಸ್ಥೆ ಮಾಡಬಲ್ಲ ಲೀಗ್ ಆಫ್ ನೇಷನ್ಸ್ ಸಂಸ್ಥೆಯಂಥ ಜನಾಂಗ ಸಂಸ್ಥೆಯೊಂದು ರೂಪುಗೊಳ್ಳಬೇಕೆಂಬ ಆಸೆ ಈತನಿಗಿತ್ತು.

	ಶಾಲೆಯ ವ್ಯವಸ್ಥೆಯ ಬಗ್ಗೆ ಕೊಮೀನಿಅಸ್ ಶೈಶವದ ಮೊದಲ ಶಾಲೆ ತಾಯಿಯ ಅಂಕ, ಎರಡನೆಯದು ಮಕ್ಕಳ ಮಾತೃಭಾಷೆಯ ಶಾಲೆ, ಮೂರನೆಯದು ಬಾಲ್ಯದ ಲ್ಯಾಟಿನ್ ಶಾಲೆ, ನಾಲ್ಕನೆಯದು ಯುವಕರ ಕಾಲೇಜು ಮತ್ತು ಪ್ರವಾಸ ಎಂದು ಸೂಚಿಸಿದ್ದಾನೆ. ಈ ವರ್ಗೀಕರಣವನ್ನೆ ಎಲ್ಲ ದೇಶಗಳಲ್ಲೂ ಈಗ ಸ್ಥೂಲವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಅನುಸರಿಸಲಾಗುತ್ತಿದೆ.

	ಕೊಮೀನಿಅಸ್ ನೂತನ ರೀತಿಯ ಪಠ್ಯಪುಸ್ತಕಗಳನ್ನೂ ರಚಿಸಿದ. ಲ್ಯಾಟಿನ್ ಭಾಷಾಬೋಧನೆಗಾಗಿ ರಚಿಸಿರುವ ಈತನ ಪುಸ್ತಕಗಳಲ್ಲಿ ಪದಗಳಿಗಿಂತ ಹೆಚ್ಚಿನ ಪ್ರಾಮುಖ್ಯ ವಸ್ತುಗಳಿಗೆ ಸಿಕ್ಕಿದೆ. ಇಂದು ಪ್ರತ್ಯಕ್ಷ ವಿಧಾನವೆಂದು ಕರೆಯುವ ಅನ್ಯಭಾಷೆಯ ಬೋಧನ ಕ್ರಮದ ನಿರೂಪಣೆಗೆ ಈತನದೇ ಮೊದಲ ಯತ್ನವೆನ್ನಬಹುದು. ಚಿತ್ರದ ಮೂಲಕ ಅನ್ಯಭಾಷೆಯನ್ನು ಬೋಧಿಸುವ ಇವನ ಆರ್ಬಿಸ್‍ಪಿಕ್ಚರ್ಸ್ ಎಂಬ ಗ್ರಂಥ ಪ್ರಪಂಚದಾದ್ಯಂತ ಆಸಕ್ತಿ ಮೂಡಿಸಿತ್ತು. ದೃಶ್ಯ ಶಿಕ್ಷಣ ಕ್ರಮಕ್ಕೆ ಈ ಗ್ರಂಥ ತಳಹದಿ ಹಾಕಿತು. ಯಾವ ಶಿಕ್ಷಣವೇ ಆಗಲಿ ಸ್ವಭಾವ ಸಮ್ಮತವಾಗಿರಬೇಕೆಂದೂ ಎಲ್ಲ ಬೋಧನ ತತ್ತ್ವಗಳ ನಿರೂಪಣೆಯಲ್ಲೂ ಅದನ್ನು ಅನುಸರಿಸಬೇಕೆಂದೂ ಈತ ಸಲಹೆ ಮಾಡಿದ್ದಾನೆ. ಇದು ಮನಶ್ಶಾಸ್ತ್ರ ಸಮ್ಮತವೂ ಆಗಿದೆ.

	ಕೊಮೀನಿಅಸ್ಸನ ಶಿಕ್ಷಣ ತತ್ತ್ವದೃಷ್ಟಿ ಈತನ ಅನಂತರದ ಯುಗಗಳಲ್ಲಿ ಹೆಚ್ಚು ಪ್ರಚಾರ ಪಡೆಯಿತು. ಆಧುನಿಕ ರಾಷ್ಟ್ರಗಳಲೆಲ್ಲ ಈತನ ಸಾರ್ವತ್ರಿಕ ಶಿಕ್ಷಣ ಬಳಕೆಗೆ ಬರುತ್ತದೆ. ಆದರೆ ಅದರ ಮೂಲಕ ಈತ ಆಶಿಸಿದ್ದ ವಿಶ್ವಶಾಂತಿ, ವಿಶ್ವಭ್ರಾತೃತ್ವಗಳು ಎಷ್ಟರಮಟ್ಟಿಗೆ ಸಿದ್ಧಿಸಿವೆ ಎಂದು ಹೇಳುವುದು ಕಷ್ಟ. 										(ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ